ಕೇಪ್ ವರ್ಡ್ ದ್ವೀಪಗಳು

ಪಶ್ಚಿಮ ಆಫ್ರಿಕದ ತೀರದ ಬಳಿ ಇರುವ ದ್ವೀಪಸ್ತೋಮ. ವರ್ಡ್ ಭೂಶಿರಕ್ಕೆ 280 ಮೈ. ದೂರದಲ್ಲಿದೆ. ಮರುಭೂಮಿಯ ಶಿರದ ಎದುರಿಗೆ ಹಸಿರು ತುಂಬಿ ನಿಂತ ನೆಲವಾದ್ದರಿಂದ ಇದನ್ನು ಪೋರ್ಚುಗೀಸ್ ನಾವಿಕರು ಕೇಪ್ ವರ್ಡ್ ಎಂದು ಕರೆದರೆಂದು ಹೇಳಲಾಗಿದೆ. ಬಾಲಚಂದ್ರನ ಆಕಾರದಲ್ಲಿರುವ ಈ ದ್ವೀಪಸ್ತೋಮ ಉತ್ತರದಿಂದ ದಕ್ಷಿಣಕ್ಕೆ ಸುಮಾರು 170 ಮೈ. ಮತ್ತು ಪೂರ್ವದಿಂದ ಪಶ್ಚಿಮಕ್ಕೆ 180 ಮೈ. ಹರಡಿಕೊಂಡಿದೆ. ಉ.ಅ. 17ಲಿ 13'-14ಲಿ47' ಮತ್ತು ಪ.ರೇ. 22ಲಿ40'-25ಲಿ 22' ನಡುವೆ 14 ದ್ವೀಪಗಳಿಂದ ಕೂಡಿದೆ. ಇದರ ವಿಸ್ತೀರ್ಣ 1,538 ಚ.ಮೈ.

	ಪಾಶ್ಚಾತ್ಯರು ಈ ದ್ವೀಪಗಳನ್ನು ಕಂಡುಹಿಡಿದದ್ದು ಯಾವಾಗ ಎಂಬ ಬಗ್ಗೆ ಖಚಿತವಾದ ಆಧಾರಗಳಿಲ್ಲ. ವೆನಿಷಿಯನ್ ನಾವಿಕ ಆಲ್ಪೈಸ್ ಕ ದ ಮೋಸ್ತೋ ಪೋರ್ಚುಗಲ್ಲಿನ ರಾಜಕುಮಾರ ಹೆನ್ರಿಯ ಸೇವೆಯಲ್ಲಿದ್ದಾಗ-1456ರಲ್ಲಿ-ಈ ದ್ವೀಪ ಸ್ತೋಮವನ್ನು ಗುರುತಿಸಿದನೆಂದು ಹೇಳಲಾಗಿದೆ. 1460ರಲ್ಲಿ ದಿಯೋಗೋ ಗೋಮ್ಸ್ ಮತ್ತು ಆಂಟೋನಿಯೋ ದ ನೋಲ-ಇವರು ಮೈವೋ ದ್ವೀಪವನ್ನು ಗುರುತಿಸಿ ಹೆಸರಿಸಿದರು. ಅವರು ಸೌನ್ ಟ್ಯಾಗೂ ದ್ವೀಪಕ್ಕೆ ಭೇಟಿ ಕೊಟ್ಟರೆಂಬುದಂತೂ ಖಚಿತ.

	ಈ ಸ್ತೋಮದ ದ್ವೀಪಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಉತ್ತರದ, ಮಾರುತಸಮ್ಮುಖ ದ್ವೀಪಗಳು ಇವು : ಬೋ ವಿಸ್ಟ, ಸಾಲ್, ಸೌನ್ ನಿಕೂಲಾವು, ಸಾಂಟಾ ಲೂಸೀಯಾ, ಸೌನ್ ವಿಸಾಂಟೆ, ಸ್ಯಾಂಟೊ ಆಂಟೌನ್, ಬ್ರಾಂಕೋ ಮತ್ತು ರಾಸೋ. ದಕ್ಷಿಣದ, ಮಾರುತವಿಮುಖ ದ್ವೀಪಗಳಿವು ; ಮೈವೊ, ಸೌನ್ ಟ್ಯಾಗೂ, ಫೋಗೂ, ಬ್ರೇವಾ ಮತ್ತು ಇಲ್ಯೇವೂಸ್ ಡೂ ರಾಂಬೂ. ಇವುಗಳ ಪೈಕಿ ಹತ್ತರಲ್ಲಿ ಮಾತ್ರ ಜನವಸತಿಯಿದೆ. ಈ ದ್ವೀಪಗಳನ್ನು ಕಂಡುಹಿಡಿದಾಗ ಇವು ನಿರ್ಜನ ಪ್ರದೇಶಗಳಾಗಿದ್ದುವು. 1470ರ ಹೊತ್ತಿಗೆ ಇವುಗಳಲ್ಲಿ ಜನ ನೆಲಸಲಾರಂಭಿಸಿದರು. ಪ್ಲಾಂಟೇಷನ್‍ಗಳಲ್ಲಿ ಕೆಲಸ ಮಾಡಲು ಪೋರ್ಚುಗೀಸರು ನೀಗ್ರೋಗಳನ್ನು ತಂಡತಂಡವಾಗಿ ಕರೆತಂದರು.

	ಈ ದ್ವೀಪಸ್ತೋಮದ ಎಲ್ಲ ದ್ವೀಪಗಳೂ ಅಗ್ನಿ ಪರ್ವತದಿಂದಾದವು. ಇವು ಆಳ ಕಡಲಿನಿಂದ ಪರಸ್ಪರ ಪ್ರತ್ಯೇಕಗೊಂಡಿವೆ. ಇವುಗಳ ಭೂಪ್ರದೇಶ ಬಹುಮಟ್ಟಿಗೆ ಪರ್ವತಮಯ. ಆದರೆ ಆಫ್ರಿಕಕ್ಕೆ ಹತ್ತಿರದಲ್ಲಿರುವ ಸಾಲ್, ಬೋ ವಿಸ್ಪ ಮತ್ತು ಮೈವೊ ದ್ವೀಪಗಳು ಬಹುತೇಕ ಸಮತಲ ಪ್ರದೇಶಗಳು ; ಅಲ್ಲಲ್ಲಿ ಮರಳಿನ ದಿಬ್ಬು ಮತ್ತು ಉಪ್ಪಿನ ಬೆಟ್ಟಗಳು ಕಾಣಬರುತ್ತವೆ. ಇಲ್ಲಿಯ ಮುಖ್ಯ ಶಿಖರಗಳು ಮೂರು : ಫೋಗೂ ದ್ವೀಪದಲ್ಲಿರುವ ಅಗ್ನಿಪರ್ವತದ ಕ್ಯಾನೋ (8,800'), ಸ್ಯಾಂಟೂ ಆಂಟೌನ್ ದ್ವೀಪದಲ್ಲಿರುವ ಪಾವೋ ದ ಅಸ್ಸುಕಾರ್ (8,000') ಮತ್ತು ಸೌನ್ ಟ್ಯಾಗೂ ದ್ವೀಪದಲ್ಲಿರುವ ಪಿಕೋ ದ ಅಂತೋನಿಯ (7,380'). ಫೋಗೂ ದ್ವೀಪದ ಅಗ್ನಿಪರ್ವತ ಜೀವಂತವಾಗಿದ್ದು, ಇದು 16 ಮತ್ತು 17ನೆಯ ಶತಮಾನಗಳಲ್ಲಿ ಆಗಿಂದಾಗ್ಗೆ ಸಿಡಿದೇಳುತ್ತಿತ್ತು. ಮುಂದೆ ಇದರ ಉಪದ್ರವ ಕಡಿಮೆಯಾಯಿತಾದರೂ 1847ರಲ್ಲಿ ಇದು ಸಿಡಿದೆದ್ದಾಗ ಅನಾಹುತವನ್ನೇ ಉಂಟುಮಾಡಿತು. 1951ರಲ್ಲಿ ಇದು ಮತ್ತೊಮ್ಮೆ ತನ್ನ ಅಸ್ತಿತ್ವವನ್ನು ಸಾರಿತಾದರೂ ಇದರ ಉಪದ್ರವ ಅಷ್ಟೇನೂ ಗಮನಾರ್ಹವಾಗಿರಲಿಲ್ಲ. ಆಗಾಗ್ಗೆ ಭೂಕಂಪಗಳಾದ ದಾಖಲೂ ಉಂಟು. ಕಡಲ ತೀರ ಬಹುಮಟ್ಟಿಗೆ ಬಂಡೆಗಳಿಂದ ತುಂಬಿದ್ದು, ತುಂಬ ಅಪಾಯಕಾರಿಯಾಗಿದೆ. ಬೋ ವಿಸ್ಟದ ಪೂರ್ವ ಕರಾವಳಿಯಲ್ಲಿ ಬಂಡಯ ಸಾಲುಗಳು, ಮರಳುದಿಬ್ಬಗಳು ಮತ್ತು ಮರಳುದಂಡೆಗಳು ತುಂಬಿಕೊಂಡಿವೆ.

	ಕೇಪ್ ವರ್ಡ್ ದ್ವೀಪಗಳದು ಉಷ್ಣವಲಯದ ವಾಯುಗುಣ, ಸರಾಸರಿ ಉಷ್ಣತೆ 75ಲಿ ಫ್ಯಾ. ಬೇಸಗೆಯ ತಿಂಗಳುಗಳಲ್ಲಿ ಇದು 80ಲಿಫ್ಯಾ.-90ಲಿಫ್ಯಾ. ವರೆಗೂ ಹೋಗುವುದುಂಟು. ಮಳೆಗಾಲದ ಅವಧಿ ಆಗಸ್ಟ್‍ನಿಂದ ಅಕ್ಟೋಬರ್‍ವರೆಗೆ. ಮಳೆ ಮಾತ್ರ ಬಹಳ ಕಡಿಮೆ.

	ಈ ದ್ವೀಪಸ್ತೋಮದಲ್ಲಿಯ ಸಸ್ಯಗಳು ಬಹುಮಟ್ಟಿಗೆ ಆಫ್ರಿಕದವು. ಇದಕ್ಕೇ ವಿಶಿಷ್ಟವಾದವೆಂದು ಹೆಸರಿಸಲಾಗಿರುವ 70 ಜಾತಿಯ ಸಸ್ಯಗಳಿವೆ. ಶುಷ್ಕ ಪ್ರದೇಶಗಳಲ್ಲಿ ಸಸ್ಯಗಳು ಕಾಣಬರುವುದಿಲ್ಲವಾದರೂ, ಫಲವತ್ತಾಗಿರುವ ಕೆಲವು ಕಣಿವೆಗಳಲ್ಲಿ ಉಷ್ಣವಲಯದ ಸಸ್ಯಗಳು ಸಾಕಷ್ಟು ಸಮೃದ್ಧವಾಗಿ ಬೆಳೆದಿವೆ. ಮಾವು, ಖರ್ಜೂರ, ಕಬ್ಬು ಮುಖ್ಯವಾದವು. ಪೋರ್ಚುಗೀಸರು ತಂದು ಬೆಳೆಸಿರುವ ಮುಖ್ಯ ಆರ್ಥಿಕ ಸಸ್ಯಗಳು ಕಾಫಿ, ಹೊಗೆಸೊಪ್ಪು, ಮೆಕ್ಕೆಜೋಳ, ಹತ್ತಿ, ಕಬ್ಬು ಮತ್ತು ಕಿತ್ತಳೆ, ಸಿಂಕೋನ, ಇಂಡಿಗೋ, ಬಟಾಣಿ ಮತ್ತು ಗೆಣಸನ್ನೂ ಬೆಳೆಯಲಾಗುತ್ತಿದೆ. ಇವುಗಳಲ್ಲಿ ಹಲವು ರಫ್ತಿನ ಬೆಳೆಗಳೂ ಹೌದು.

	ಪ್ರಾಣಿಗಳ ಸಂಖ್ಯೆ ತೀರ ಕಡಿಮೆ. ದೇಶೀಯ ಸಸ್ತನಿಗಳಂತೂ ಇಲ್ಲವೇ ಇಲ್ಲ. ದ್ವೀಪಗಳಲ್ಲಿ ಕೆಲವು ಬಗೆಯ ಹಕ್ಕಿಗಳು ಮಾತ್ರ ಕಾಣಬರುತ್ತವೆ. ಈ ದ್ವೀಪಸ್ತೋಮದ ನಿವಾಸಿಗಳು ಪಶುಪಾಲನೆಯನ್ನೂ ಕೈಗೊಂಡಿದ್ದಾರೆ. ಮೇಕೆ, ಕುದುರೆ, ಹಂದಿ ಮತ್ತು ಕತ್ತೆಗಳು ಸಾಕುಪ್ರಾಣಿಗಳು. ಕಡಲತೀರದಲ್ಲಿ ಕಡಲಾಮೆಗಳು ಹೇರಳ.	

	ಇಲ್ಲಿ ಹುಲ್ಲಿನ ಹ್ಯಾಟು, ಕುಸುರಿಗೆಲಸದ ವಸ್ತ್ರ, ಹತ್ತಿಬಟ್ಟೆ ಮತ್ತು ಬ್ರಾಂದಿ ಉತ್ಪಾದನೆಯಾಗುತ್ತವೆ. ಅನೇಕ ದ್ವೀಪಗಳಲ್ಲಿ ಉಪ್ಪಿನ ಗಣಿಗಳುಂಟು. ಮುಖ್ಯ ಧಾನ್ಯಗಳು, ಬಣ್ಣದ ವಸ್ತುಗಳು, ಮೇಕೆಯ ಚರ್ಮ, ಉಪ್ಪು, ಮದ್ಯಸಾರ ಮತ್ತು ಮೀನುಗಳನ್ನು ಪೋರ್ಚುಗಲ್ಲಿಗೂ ಆಫ್ರಿಕದ ಕರಾವಳಿಯಲ್ಲಿರುವ ಪೋರ್ಚುಗೀಸ್ ವಸಾಹತುಗಳಿಗೂ ರಫ್ತು ಮಾಡಲಾಗುತ್ತದೆ.

	ಸೇ. 70ರಷ್ಟು ದ್ವೀಪನಿವಾಸಿಗಳಿಗೆ ಕೃಷಿಯೇ ಜೀವನೋಪಾಯ. ಈ ದ್ವೀಪಸ್ತೋಮಕ್ಕಿರುವ ಅಭಿಶಾಪವೆಂದರೆ ನೀರಿನ ಕೊರತೆ. ಮಳೆಯಾದ ವರ್ಷದಲ್ಲಿ ಉತ್ಪಾದನೆ ಹೆಚ್ಚಾಗಿರುತ್ತದೆಯಾದರೂ ಅನಾವೃಷ್ಟಿಯ ಭಯ ಇದ್ದೇ ಇದೆ. ಅನೇಕ ವೇಳೆ ಈ ದ್ವೀಪಸ್ತೋಮ ಮೂರು ವರ್ಷಗಳಷ್ಟು ದೀರ್ಘಕಾಲ ಅನಾವೃಷ್ಟಿಗೆ ತುತ್ತಾಗಿರುವುದೂ ಉಂಟು. ಈ ಪ್ರದೇಶ ದಿನ ಕಳೆದಂತೆಲ್ಲಾ ಶುಷ್ಕವಾಗಿ ಹೋಗುತ್ತಿರುವುದರಿಂದ ಈ ಸಮಸ್ಯೆ ಮತ್ತಷ್ಟು ತೀವ್ರವಾಗಿ ಪರಿಣಮಿಸಿದೆ. ಮೊದಲಿಗೆ ಇಲ್ಲಿ ಬಂದು ನೆಲೆಸಿದ ಜನ ಅರಣ್ಯನಿರ್ಮೂಲ ಕಾರ್ಯದಲ್ಲಿ ತೊಡಗಿದ್ದು ಮತ್ತು ಮೇಕೆಗಳನ್ನು ಇಲ್ಲಿ ತಂದುಬಿಟ್ಟದ್ದು ಇದಕ್ಕೆ ಕಾರಣವೆಂದು ಹೇಳಲಾಗಿದೆ. ಈಚೆಗೆ ಜಲಸಂಶೋಧನೆ ಮತ್ತು ನೀರಾವರಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಅರಣ್ಯಪ್ರದೇಶವನ್ನು ಹೆಚ್ಚಿಸುವ ಕಾರ್ಯಕ್ರಮವೂ ಇದರಲ್ಲಿ ಸೇರಿದೆ. ಕೆಲವು ದ್ವೀಪಗಳು ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಹಣ್ಣುಗಳ ಬೆಳೆಗೆ ಪ್ರಶಸ್ತವಾಗಿವೆಯೆಂದು ತಿಳಿದುಬಂದಿದೆ. ಆದರೆ ಸಾರಿಗೆ ಸಂಪರ್ಕ ವ್ಯವಸ್ಥೆ ಬೆಳೆದಿಲ್ಲದಿರುವುದರಿಂದ ವಾಣಿಜ್ಯ ರೂಪದಲ್ಲಿ ಲಾಭದಾಯಕವಾಗುವಂತೆ ಈ ಉದ್ಯಮವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ. ಈ ದ್ವೀಪಸ್ತೋಮದಲ್ಲಿ ಇರುವುದೇ ಒಟ್ಟು ಸುಮಾರು 340 ಮೈಲಿಗಳಷ್ಟು ಉದ್ದದ ರಸ್ತೆಗಳು. ಸಾಲ್ ದ್ವೀಪದಲ್ಲಿರುವ ಎಸ್ಪಾರ್‍ಗೋಸ್ ಮುಖ್ಯ ವಿಮಾನ ನಿಲ್ದಾಣ. ಮಿಂಡೆಲೋ ಮುಖ್ಯ ಬಂದರು.

	ಈ ದ್ವೀಪಸ್ತೋಮದ ನಿವಾಸಿಗಳು ನೀಗ್ರೋಗಳಿಂದ ಸರಳೀಕೃತವಾಗಿರುವ ಪೋರ್ಚುಗೀಸ್ ಭಾಷೆಯನ್ನು ಅಥವಾ ಪೋರ್ಚುಗೀಸಿನ ಅಪಭ್ರಂಶರೂಪವೊಂದನ್ನು ಬಳಸುತ್ತಿದ್ದಾರೆ. ಇದನ್ನು ಲಿಂಗ್ವಾ ಕ್ರಿಯೋಲಾ ಎನ್ನುತ್ತಾರೆ. ಇಲ್ಲಿಯ ದ್ವೀಪಗಳು ಮತ್ತು ಕಿರುದ್ವೀಪಗಳು ಸಮುದ್ರ ಓಣಿಗಳಿಂದ ಪರಸ್ಪರ ಬೇರ್ಪಟ್ಟಿರುವುದರಿಂದ ಹಲವು ಉಪಭಾಷೆಗಳು ಬೆಳೆಯುತ್ತಿವೆ. ಇಲ್ಲಿರುವವರು ಮುಖ್ಯವಾಗಿ ರೋಮನ್ ಕೆಥೊಲಿಕರು.

	ರೈಬೀರಿಯ ಗ್ರಾಂಡ್ ಇದರ ಮೊದಲ ರಾಜಧಾನಿ. 1462ರಲ್ಲಿ ಇದು ರಾಜಧಾನಿಯಾಗಿತ್ತು. 1585ರಲ್ಲಿ ಮತ್ತು 1592ರಲ್ಲಿ ಎರಡು ಬಾರಿ ಫ್ರಾನ್ಸಿಸ್ ಡ್ರೇಕ್ ಇದರ ಮೇಲೆ ದಾಳಿ ಮಾಡಿದ. ಇದನ್ನು ಆಕ್ರಮಿಸಿಕೊಳ್ಳಲು ಡಚ್ಚರು ಒಮ್ಮೆ ವಿಫಲ ಪ್ರಯತ್ನ ನಡೆಸಿದರು. ರಾಜಧಾನಿಯ ಸಂಪದ್ಯುಕ್ತತೆಯೇ ಈ ಆಕ್ರಮಣಗಳಿಗೆ ಕಾರಣ. 1712ರಲ್ಲಿ ಮತ್ತೆ ಇದು ಫ್ರೆಂಚರ ದಾಳಿಗೆ ತುತ್ತಾಯಿತು. ಅನಂತರ ಈ ನಗರವನ್ನು ವಿಸರ್ಜಿಸಲಾಯಿತು. ಪ್ರೈಯಾ ಈಗಿನ ರಾಜಧಾನಿ.

	ಪೋರ್ಚುಗಲ್ಲಿನ ದೊರೆಯಾದ ಐದನೆಯ ಆಲ್ಫಾನ್ಸೋ ಈ ದ್ವೀಪಸ್ತೋಮವನ್ನು ತನ್ನ ಸೋದರ ರಾಜಕುಮಾರ ಫರ್ಡಿನೆಂಡನಿಗೆ ಬಳುವಳಿಯಾಗಿ ಕೊಟ್ಟ. 1466ರಲ್ಲಿ ಇಲ್ಲಿಯ ನಿವಾಸಿಗಳಿಗೆ ಗಿನಿಯ ಗುಲಾಮರ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಅಧಿಕಾರ ದೊರೆಯಿತು. 1470ರಲ್ಲಿ ಫರ್ಡಿನೆಂಡ್ ತೀರಿಕೊಂಡ ತರುವಾಯ ಈ ಅಧಿಕಾರಗಳೆಲ್ಲ ದೊರೆಗೇ ಹಿಂದಿರುಗಿದುವು. ಮುಂದೆ ಎರಡನೆಯ ಜಾನ್ ರಾಜಕುಮಾರ ಮ್ಯಾನುಯೆಲ್ಗೆ ಇದು ಬಳುವಳಿಯಾಗಿ ಬಂತು. ಸ್ವಲ್ಪ ಕಾಲಾನಂತರ (1495) ಮ್ಯಾನುಯೆಲ್ ಪಟ್ಟಕ್ಕೆ ಬಂದಾಗ ಈ ದ್ವೀಪಸ್ತೋಮ ರಾಜ್ಯಾಧಿಪತ್ಯದ ಅಂಗವೇ ಆಗಿ ಪರಿಣಮಿಸಿತು. ಗುಲಾಮರ ವ್ಯಾಪಾರ ಉಚ್ಛ್ರಾಯಸ್ಥಿತಿ ತಲಪಿದಂತೆ ಇದರ ಪ್ರಾಮುಖ್ಯವೂ ಹೆಚ್ಚಿತು. 1595ರ ಹೊತ್ತಿಗೆ ಈ ದ್ವೀಪಸ್ತೋಮದ ವ್ಯವಹಾರಗಳಿಗೆಂದೇ ಒಬ್ಬ ಗವರ್ನರನ್ನು ನೇಮಿಸಲಾಯಿತು. ಗುಲಾಮರ ವ್ಯಾಪಾರ ಇಳಿಮುಖವಾಗುತ್ತ ಬಂದು, 1876ರ ಹೊತ್ತಿಗೆ ಅದು ಬಹಿಷ್ಕøತವಾಗಿ ಪರಿಣಮಿಸಿದಾಗ ಈ ದ್ವೀಪಸ್ತೋಮದ ಪ್ರಾಮುಖ್ಯ ಕಡಿಮೆಯಾಯಿತು. ಇದರ ಭೌಗೋಳಿಕ ನೆಲೆಯಿಂದಾಗಿ ಇದಕ್ಕೆ 19ನೆಯ ಶತಮಾನದ ಹೊತ್ತಿಗೆ ಮತ್ತೆ ಪ್ರಾಮುಖ್ಯ ಬಂತು. ಯೂರೋಪ್, ದಕ್ಷಿಣ ಅಮೆರಿಕ ಮತ್ತು ದಕ್ಷಿಣ ಆಫ್ರಿಕಗಳ ನಡುವಣ ಸಮುದ್ರ ಮಾರ್ಗದಲ್ಲಿ ಇದು ಇರುವುದರಿಂದ ಇಲ್ಲಿ ಕಲ್ಲಿದ್ದಲು ಪೂರೈಕೆ ಮತ್ತು ಕೇಬಲ್ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದೇಶಗಳಿಗೆ ವಲಸೆ ಹೋದ ಇಲ್ಲಿಯ ನೆಲಸಿಗರು ತಮ್ಮ ತಾಯ್ನಾಡಿಗೆ ಕಳುಹಿಸುತ್ತಿದ್ದ ಹಣದಿಂದಾಗಿ ಈ ದ್ವೀಪಸ್ತೋಮದ ಆರ್ಥಿಕ ಪರಿಸ್ಥಿತಿ ಬಹುಮಟ್ಟಿಗೆ ಸುಧಾರಿಸಿತು. ಒಂದನೆಯ ಮಹಾಯುದ್ಧದ ಅನಂತರ ವಲಸೆಯ ನಿರ್ಬಂಧಗಳು ಹೆಚ್ಚಿದುದರಿಂದಲೂ ಪೋರ್ಚುಗೀಸ್ ಸರ್ಕಾರದ ನೆರವು ಮಿತಗೊಂಡದ್ದರಿಂದಲೂ ಇದರ ಪ್ರಗತಿ ಕುಂಠಿತಗೊಂಡಿತು. 1951ರ ಬಳಿಕ ಈ ವಸಾಹತಿನ ಸ್ಥಾನಮಾನಗಳು ಕೊಂಚ ಬದಲಾದುವು. ಇದನ್ನು ಸಮುದ್ರಾನಂತರ ಪ್ರಾಂತ್ಯವೆಂದು ಪರಿಗಣಿಸಲಾಯಿತು. ಇದರ ಆಡಳಿತ ನಿರ್ವಹಣೆಗಾಗಿ ಲಿಸ್ಬನ್‍ನಲ್ಲಿ ಗವರ್ನರನ್ನು ನೇಮಿಸಲಾಯಿತು. ಇದಕ್ಕೆ ಸ್ವಲ್ಪಮಟ್ಟಿಗೆ ಪ್ರಾದೇಶಿಕ ಸ್ವಾಯತ್ತೆ ನೀಡಲಾಯಿತು.

	ಆಡಳಿತದ ಅನುಕೂಲಕ್ಕಾಗಿ ಈ ದ್ವೀಪಗಳನ್ನು 12 ಜಿಲ್ಲೆಗಳನ್ನಾಗಿಯೂ 31 ಉಪಜಿಲ್ಲೆಗಳನ್ನಾಗಿಯೂ ವಿಭಾಗಿಸಲಾಗಿದೆ.                                
	(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ